ತೋಳ
ಕಾರ್ನಿವೊರ ಗಣದ ಕೇನಿಡೀ ಕುಟುಂಬಕ್ಕೆ ಸೇರಿದ ವನ್ಯವಾಸಿ ಸಸ್ತನಿ (ವುಲ್ಫ್). ನಾಯಿಯ ಹತ್ತಿರ ಸಂಬಂಧಿ. ನಾಯಿಯೂ ತೋಳವೂ ಕೇನಿಸ್ ಎಂಬ ಜಾತಿಗೆ ಸೇರಿವೆ. ತೋಳದ ವೈe್ಞÁನಿಕ ಹೆಸರು ಕೇನಿಸ್ ಲೂಪಸ್. ಕೇನಿಡೀ ಕುಟುಂಬದ ಪ್ರಾಣಿಗಳಲ್ಲೆಲ್ಲ ತೋಳವೇ ಅತ್ಯಂತ ದೊಡ್ಡ ಪ್ರಾಣಿ. ಗಂಡುತೋಳವೊಂದು ಮೂತಿಯಿಂದ ಬಾಲದ ತುದಿಯ ವರೆಗೆ ಏಳು ಅಡಿ ಉದ್ದ ಇರುವುದುಂಟು. ಇದರ ಬಾಲ ಪೊದರಿನಂತಿದ್ದು 2' ಉದ್ದವಿರುತ್ತದೆ. ಹೆಣ್ಣುತೋಳ ಗಾತ್ರದಲ್ಲಿ ಗಂಡಿಗಿಂತ ಸ್ವಲ್ಪ ಚಿಕ್ಕದ್ದು. ಉತ್ತರ ವಲಯದ ತೋಳಗಳು ದಕ್ಷಿಣವಲಯದ ತೋಳಗಳಿಗಿಂತ ಗಾತ್ರದಲ್ಲಿ ದೊಡ್ಡವು. ತೋಳದ ಮೈಮೇಲಿನ ತುಪ್ಪಟ ಒತ್ತಾಗಿ ಉದ್ದವಾಗಿ ಇದೆ. ಅಲ್ಲದೆ ಇದು ನಯವಾಗಿಯೂ ಮೃದುವಾಗಿಯೂ ಉಂಟು. ತುಪ್ಪಟದ ಬಣ್ಣ ಬೂದು ಅಥವಾ ಕೆಂಪು. ಕಪ್ಪು ಮಿಶ್ರಿತ ಕೆಂಪು, ಕಪ್ಪು ಇಲ್ಲವೆ ಬಿಳಿಯ ಬಣ್ಣದ ತೋಳಗಳೂ ಉಂಟು.' ತೋಳ ಪ್ರಬೇಧಗಳಲ್ಲೆಲ್ಲ ಬೂದು ಬಣ್ಣದ ತೋಳವೇ ಅತ್ಯಂತ ಬಲಶಾಲಿಯಾದದ್ದು. ಇದರ ತಲೆಬುರುಡೆ ಅಗಲವಾಗಿರುವುದಲ್ಲದೆ ಕಾಳುಗಳು ದಪ್ಪಗೆ ಬಲಯುತವಾಗಿದ್ದು ಪಾದ ಅಗಲವಾಗಿರುತ್ತದೆ. ಎದೆಗೂಡು ಕಿರಿದು, ಒಂದು ಕಾಲದಲ್ಲಿ ಬೂದು ಬಣ್ಣದ ತೋಳಗಳು ಯುರೋಪ್, ಏಷ್ಯ ಮತ್ತು ಅಮೇರಿಕಗಳಲ್ಲಿ ಅಪಾರಸಂಖ್ಯೆಯಲ್ಲಿದ್ದವು. ಈಗ ಇವು ಉತ್ತರ ಅಮೇರಿಕದ ಅಲಾಸ್ಕ, ಉತ್ತರ ಕೆನಡದ ಕೆಲವು ಭಾಗಗಳಲ್ಲಿ ಮಾತ್ರ ಹೆಚ್ಚಾಗಿ ಇವೆ. ರಾಕಿ ಪರ್ವತಸ್ತೋಮಗಳ ಬಳಿ ಇವು ಅಲ್ಲಲ್ಲಿ ಕಂಡುಬರುವುದುಂಟು. ಬ್ರಿಟಿಷ್ ದ್ವೀಪಗಳು, ಪಶ್ಚಿಮ ಯುರೋಪ್, ಮುಂತಾದ ಕಡೆಗಳಲ್ಲಿ ಇವು ಇಲ್ಲವೇ ಇಲ್ಲ. ಭಾರತದ ದಕ್ಷಿಣ ಭಾಗದಲೂ ಇವನ್ನು ಕಾಣಬಹುದು. 
ಬೂದು ಬಣ್ಣದ ತೋಳ ಭಯವನ್ನೇ ಅರಿಯದು. ಆಕ್ರಮಣಕಾರಿ ಪ್ರವೃತ್ತಿಯುಳ್ಳ ಇದು ಕುದುರೆ, ಎಮ್ಮೆ, ಕುರಿ, ಜಿಂಕೆ, ಸಾರಂಗ, ಮುಂತಾದ ಪ್ರಾಣಿಗಳನ್ನು ತಿನ್ನುತ್ತದೆ. ತೋಳಗಳು ಸಾಮಾನ್ಯವಾಗಿ ಚಿಕ್ಕಚಿಕ್ಕ ಗುಂಪುಗಳನ್ನು ಕಟ್ಟಿಕೊಂಡು ಬೇಟೆಯಾಡುತ್ತವೆ. ಬೇಟೆಯ ಕಾಲದಲ್ಲಿ ಇವು ತೋರುವ ತಾಳ್ಮೆ ಹಾಗೂ ವೇಗ ಮೆಚ್ಚತಕ್ಕದ್ದು. ದೊಡ್ಡ ಪ್ರಾಣಿಗಳನ್ನೇ ಅಲ್ಲದೆ, ಮೊಲ, ಇಲಿ, ಮುಂತಾದ ಚಿಕ್ಕ ಪ್ರಾಣಿಗಳನ್ನು ಕೂಡ ಇವು ತಿನ್ನುತ್ತವೆ. ಬಲು ಹೊಟ್ಟೆಬಾಕ ಪ್ರಾಣಿಗಳಾದ ಇವು ಬೇಟೆ ದೊರೆಯದಿದ್ದಾಗ ಕೊಳೆತ ಮಾಂಸವನ್ನು ಕೂಡ ತಿನ್ನುವುದುಂಟು. ತೋಳಗಳು ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯನ್ನು ಹತೋಟಿಯಲ್ಲಿಡಲು ಕಾರಣವಾಗಿವೆ. ಆದರೆ ಮುದಿ ತೋಳಗಳು ಹೆಚ್ಚಾಗಿ ರೈತನ ಸಾಕು ಪ್ರಾಣಿಗಳನ್ನು ಬೇಟೆಯಾಡುವವು. ಕೆಲವು ಬಾರಿ ಮಕ್ಕಳ ಮೇಲೆ ಹಾಗೂ ಮನುಷ್ಯರ ಮೇಲೆ ಎರಗುವುದುಂಟು. ಜನಸಂದಣಿಯಿಂದ ದೂರವಿದ್ದು ಒತ್ತಾದ ಮರಗಳಿರುವ ಪೊದೆ ಹಾಗೂ ಗುಡ್ಡಗಾಡುಗಳಲ್ಲಿ ಇವು ವಾಸಿಸುತ್ತವೆ.

ತೋಳಗಳು 2-3 ವರ್ಷ ವಯಸ್ಸಿಗೆ ಬೆದೆಗೆ ಬರುತ್ತವೆ. ಗಂಡು ಮತ್ತು ಹೆಣ್ಣುಗಳು ತಮ್ಮ ಜೀವನದ ಕೊನೆಯವರೆಗೆ ಅನ್ಯೋನ್ಯವಾಗಿ ಸಂಗಾತಿಗಳಾಗಿ ಬಾಳುತ್ತವೆ. ಇವುಗಳ ಸಂತಾನೋತ್ಪತ್ತಿಯ ಕಾಲ ಡಿಸೆಂಬರ್ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೆ. ಗರ್ಭ ಧರಿಸಿದ 63 ದಿವಸಗಳ ಅನಂತರ ಹೆಣ್ಣು ಮರಿ ಹಾಕುತ್ತದೆ. 4-14 ಮರಿಗಳನ್ನು ಇವು ಈಯುವುದುಂಟು.

ಗವಿಯಂತಿರುವ ದೊಗರು ಗವಿ ಮುಂತಾದ ತಾನಗಳನ್ನು ಇವು ವಾಸಕ್ಕೆ ಆರಿಸಿಕೊಳ್ಳುತ್ತವೆ. ಬೇರಾವುದಾದರೂ ಪ್ರಾಣಿ ನಿರ್ಮಿಸಿಕೊಂಡಿದ್ದ ಸ್ಥಳಗಳನ್ನು ಆಕ್ರಮಿಸಿಕೊಳ್ಳುವುದೂ ಉಂಟು. ನಿವಾಸಸ್ಥಾನದ ಸುತ್ತುಮುತ್ತು ಗಾಳಿ ಮತ್ತು ಬೆಳಕು ಚೆನ್ನಾಗಿ ಬೀಳುತ್ತಿರುವಂತೆ ಇರುವ ಸ್ಥಳಗಳನ್ನು ಇವು ಆಶಿಸುತ್ತವೆ. ಒಂದೇ ಕುಟುಂಬದ ತೋಳಗಳು ಒಂದರೊಡನೊಂದು ಹೊಂದಿಕೊಂಡು ಸ್ನೇಹಮಯಿಯಾಗಿ ಬದುಕುತ್ತವೆ. ಮರಿಗಳನ್ನು ಅತಿ ಪ್ರೀತಿಯಿಂದ ಜೋಪಾನವಾಗಿ ಸಾಕುತ್ತವೆ. ತಮ್ಮ ಗುಂಪಿಗೆ ಬೇರೆಯ ಗುಂಪಿನ ತೋಳಗಳನ್ನು ಇವು ಸೇರಿಸುವುದಿಲ್ಲ.

ಕೇನಿಸ್ ನೈಜರ್ ಎಂಬುದು ಕೆಂಪು ತೋಳ. ಇದು ಉತ್ತರ ಅಮೆರಿಕದ ದಕ್ಷಿಣ ಭಾಗಗಳ ಒಳನಾಡಿನಲ್ಲಿ ಕಂಡುಬರುತ್ತವೆ. ಗಾತ್ರದಲ್ಲಿ ಬೂದುಬಣ್ಣದ ತೋಳಕ್ಕಿಂತ ಚಿಕ್ಕದು. ಮೈಬಣ್ಣ ಕೆಂಪು ಅಥವಾ ಕಪ್ಪು.

ಅಂಟಾಕ್ರ್ಟಿಕ್ ಪ್ರದೇಶದ ತೋಳ ನರಿಯ ಆಕಾರದ್ದು. ಇದಕ್ಕೆ ಡೂಸಿಕಾಯಿನ್ ಎಂದು ಹೆಸರು. ದಕ್ಷಿಣ ಅಮೇರಿಕದ ಜಾತಿಯನ್ನು ಕ್ರೈಸೊಕಾಯಿನ್ ಎನ್ನಲಾಗುವುದು. ಆಫ್ರಿಕದ ತೋಳಕ್ಕೆ ಪ್ರೋಟೆರಿಸ್ ಎಂದು ಹೆಸರು. ಇದು ಕಿರುಬನ ಜಾತಿಗೆ ಸೇರಿದೆ.
(ಎಸ್.ಬಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ